ತಿರುಬಾನಿ ರೇಚಕಗಳು -
	ಆಳದಲ್ಲಿರುವ ನೀರನ್ನು ತಿರುಬಾನಿಯ ನೆರವಿನಿಂದ ಎತ್ತಿ ಸಾಗಿಸಲು ಬಳಸುವ ರೇಚಕಗಳು (ಟರ್ಬೈನ್ ಪಂಪ್ಸ್). ಅಪಕೇಂದ್ರಕ ರೇಚಕಗಳ ಪೈಕಿ ಇವು ಒಂದು ಬಗೆಯವು. ಇವು ರೋಟೋಡೈನಮಿಕ್ ಇಲ್ಲವೇ ಡೈನಮಿಕ್ ಒತ್ತಡದ ರೇಚಕಗಳು. ಇವನ್ನು ಏಕ ಹಂತ (ಸಿಂಗಲ್ ಸ್ಟೇಜ್) ಮತ್ತು ಬಹು ಹಂತ (ಮಲ್ಟಿಸ್ಟೇಜ್) ರೇಚಕಗಳೆಂದು ವಿಂಗಡಿಸಬಹುದು. ಮತ್ತೆ ಇವನ್ನು ಕ್ಷಿತಿಜೀಯ ಹಾಗೂ ಊಧ್ರ್ವ ತಿರುಬಾನಿಗಳೆಂದೂ ವಿಂಗಡಿಸಬಹುದು. ಊಧ್ರ್ವ ಬಹುಹಂತ ತಿರುಬಾನಿಗಳನ್ನು ಆಳಬಾವಿ ಅಥವಾ ಗಭೀರ ಕೂಪ ರೇಚಕಗಳೆಂದೂ ಕರೆಯುತ್ತಾರೆ. ಇವನ್ನು ಆಳಬಾವಿಯ ನೀರಿನೊಳಗೆ ಪ್ರತಿಷ್ಠಾಪಿಸುವುದೂ ಉಂಟು. ಪ್ರತಿಷ್ಠಾಪನೆಗೆ ಅಲ್ಪ ಸ್ಥಳವಿದ್ದರೂ ಸಾಕು. ಆದ್ದರಿಂದ ಇವನ್ನು ಕಿರುಬಾವಿ ಮತ್ತು ಗಣಿಗಳಲ್ಲಿ ಉಪಯೋಗಿಸುತ್ತಾರೆ. ನಿರ್ದಿಷ್ಟ ಶೀರ್ಷ ಮತ್ತು ನೀರೆತ್ತುವ ದರದಲ್ಲಿ ಇದರ ದಕ್ಷತೆ ಉತ್ತಮವಾದುದು.

	ಕ್ರಿಯಾತತ್ತ್ವ : ಚಿತ್ರದಲ್ಲಿ ಏಕಹಂತ ತಿರುಬಾನಿಯ ವಿವಿಧ ಭಾಗಗಳನ್ನು ತೋರಿಸಿದೆ. ಇದರಲ್ಲಿ ಪ್ರಣೋದಕ (ಇಮ್ಪೆಲ್ಲರ್) I ನಿಂದ ಉತ್ಪನ್ನವಾದ ವೇಗಶೀರ್ಷ (ವೆಲಾಸಿಟಿ ಹೆಡ್) ಅಲಗು ಂ ಗಳ ಸಹಾಯದಿಂದ ಒತ್ತಡ ಶೀರ್ಷವಾಗಿ ಬದಲಾವಣೆ ಆಗುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ ಮಾರ್ಗದರ್ಶಿ ಚಕ್ರದಿಂದ (ಗೈಡ್ ಮೀಲ್) ಆವರಿಸಲ್ಪಟ್ಟ ಅನೇಕ ಸ್ತಬ್ಧ ಅಲಗುಗಳನ್ನು ಒಳಗೊಂಡ ಪ್ರಣೋದಕ ಅನುಕ್ರವiವಾಗಿ ಪರಿಧಿಕಡೆಗೆ ದೊಡ್ಡದಾಗುವ ನಿರ್ಗಮವನ್ನು ದೊರಕಿಸುತ್ತದೆ. ಪ್ರಣೋದಕದಿಂದ ಹೊರಹೊಮ್ಮುವ ನೀರು ಮಾರ್ಗದರ್ಶೀ ಅಲಗುಗಳ ಮೇಲೆ ಹರಿಯುತ್ತದೆ. ಹೀಗೆ ಹರಿಯುವಾಗ ನಿರ್ಗಮ ಅಮಕ್ರಮವಾಗಿ ದೊಡ್ಡದಾಗುವುದರಿಂದ ವೇಗ ಕಡಿಮೆಯಾಗಿ ಒತ್ತಡ ಹೆಚ್ಚುತ್ತದೆ. ಆದ್ದರಿಂದ ವೇಗಶೀರ್ಷ ಒತ್ತಡ ಶೀರ್ಷವಾಗಿ ಪರಿಣಮಿಸಿ ನೀರನ್ನು ಎತ್ತುತ್ತದೆ. ಇದಕ್ಕೆ ನೀರು ಮಾರ್ಗದರ್ಶಿ ಅಲಗುಗಳನ್ನು ಪ್ರವೇಶಿಸುವ ಕೋನ ಮತ್ತು ಪ್ರಣೋದಕವನ್ನು ಬಿಡುವಾಗ ನೀರಿನ ನಿರಪೇಕ್ಷವೇಗದ ಕೋನ ಒಂದೇ ಆಗಿರಬೇಕು. ಇದು ಒಂದು ಸುಲಭ ಮತ್ತು ಅಲ್ಪ ಖರ್ಚಿನ ರಚನೆ. ಬಹುಹಂತ ತಿರುಬಾನಿಗಳಲ್ಲಿಯೂ ಇದೇ ರಚನೆಯನ್ನು ಉಪಯೋಗಿಸಲಾಗಿದೆ. 

ಚಿತ್ರ-1

	ಏಕಹಂತ ತಿರುಬಾನಿಯಲ್ಲಿ ಒಂದೇ ಒಂದು ಪ್ರಣೋದಕವನ್ನು ಮಾತ್ರ ದಂಡಕ್ಕೆ (ಶ್ಯಾಫ್ಟ್) ಜೋಡಿಸಲಾಗುತ್ತದೆ. ಇದನ್ನು ಕ್ಷಿತಿಜೀಯವಾಗಿ ಅಥವಾ ಊಧ್ರ್ವವಾಗಿ ಪ್ರತಿಷ್ಠಾಪಿಸಬಹುದು. ಸಾಮಾನ್ಯವಾಗಿ ಕಡಿಮೆ ಎತ್ತರಕ್ಕೆ ನೀರೆತ್ತಲು ಇದನ್ನು ಉಪಯೋಗಿಸುತ್ತಾರೆ. ಬಹುಹಂತ ತಿರುಬಾನಿಯಲ್ಲಿ ಎರಡು ಅಥವಾ ಹೆಚ್ಚು ಪ್ರಣೋದಕಗಳನ್ನು ಮಾರ್ಗದರ್ಶಿ ಚಕ್ರಗಳಿಂದ ಆವರಿಸಿದ ದಂಡಕ್ಕೆ ಜೋಡಿಸಲಾಗುತ್ತದೆ. ಅದು ಅಡಕವಾಗಿ ಅಳವಟ್ಟಿರುವುದು, ಅಲ್ಲದೆ ಊಧ್ರ್ವ ಮುಖದಲ್ಲಿ ಅಲ್ಪ ಸ್ಥಳವನ್ನು ವ್ಯಾಪಿಸಿರುವುದು. ಆದ್ದರಿಂದ ಅದನ್ನು ಊಧ್ರ್ವವಾಗಿ ಪ್ರತಿಷ್ಠಾಪಿಸಲಾಗುತ್ತದೆ. ತಿರುಬಾನಿಯ ಹಂತಗಳು ಅವಶ್ಯಕವಾದ ಸರಬರಾಜು ಶೀರ್ಷವನ್ನು (ಡೆಲಿವರಿ ಹೆಡ್) ಅವಲಂಬಿಸುತ್ತವೆ.

	ಊಧ್ರ್ವ ತಿರುಬಾನಿ (ಆಳಬಾವಿರೇಚಕ); ಊಧ್ರ್ವ ತಿರುಬಾನಿಯ ಚಿತ್ರ (2) ಅದರ ರಚನೆಯ ವಿವರವನ್ನು ತೋರಿಸುತ್ತದೆ. ಅದು ರೇಖಾ ದಂಡ (ಲೈನ್ ಶ್ಯಾಫ್ಟ್), ರೇಚಕ ದಂಡ ಮತ್ತು ಚೂಷಣ (ಸಕ್ಷನ್) ಕೊಳವೆಗಳನ್ನು ಒಳಗೊಂಡಿದೆ. ಬಹುಹಂತ ತಿರುಬಾನಿಯ ಪ್ರಣೋದಕಗಳನ್ನು ರೇಚಕ ದಂಡಕ್ಕೆ ಜೋಡಿಸಿದೆ. 

ಚಿತ್ರ-2

ಇದನ್ನು ಮುಚ್ಚು ಕೊಳವೆಯಿಂದ (ಕವರ್ ಪೈಪ್) ಆವರಿಸಲ್ಪಟ್ಟ ರೇಖಾದಂಡಕ್ಕೆ ಯುಗ್ಮಸಿದ (ಕಪಲ್ಡ್). ಕಂಪನ ಮತ್ತು ಚಲನೆಗಳನ್ನು (ವಿಪ್) ತಪ್ಪಿಸಲು ಅಲ್ಲಲ್ಲಿ ದಂಡಕ್ಕೆ ಕಂಚಿನ ಬೇರಿಂಗುಗಳನ್ನು ಅಳವಡಿಸಿದೆ. ರೇಖಾದಂಡದ ಮೇಲ್ತುದಿಯಲ್ಲಿ ನೂಕು (ಥ್ರಸ್ಟ್) ಬ್ಯಾರಿಂಗ್ ಇದೆ. ಅದು ಎಲ್ಲ ಪ್ರಣೋದಕಗಳ ಮತ್ತು ದಂಡದ ತೂಕವನ್ನು ಹೊರುತ್ತದೆ. ಸಾಮಾನ್ಯವಾಗಿ ರೇಖಾದಂಡದ ಮೇಲ್ತುದಿಯಲ್ಲಿ ಇಟ್ಟಿರುವ ಊಧ್ರ್ವ ವಿದ್ಯುತ್ ಮೋಟರು ತಿರುಬಾನಿಯನ್ನು ತಿರುಗಿಸುತ್ತದೆ. ಅದು ಸಾಮಾನ್ಯವಾಗಿ ಭೂಮಟ್ಟದ ಮೇಲಿರುವುದು. ನೀರಿನೊಳಗಿಡುವುದೂ ಉಂಟು. ಆದರೆ ಅಪರೂಪ. ರೇಚಕವನ್ನು ತಿರುಗಿಸಲು ಡೀಸಲ್ ಎಂಜಿನ್ನನ್ನು ಉಪಯೋಗಿಸುವುದೂ ಇವೆ. ಮೋಟಾರಾಗಲಿ ಎಂಜಿನ್ ಆಗಲಿ ನೀರಿನಿಂದ ಪ್ರತ್ಯೇಕವಾಗಿರುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ ರೇಚಕ ದಂಡದ ಕೆಳತುದಿಯಲ್ಲಿ ಗುಂಪಾಗಿ ಜೋಡಿಸಿದ ಪ್ರಣೋದಕಗಳನ್ನು ಒಳಗೊಂಡ ರೇಚಕ ಉಂಟು. ಎಲ್ಲ ಪ್ರಣೋದಕಗಳೂ ಕನಿಷ್ಠ ಮೂರು ಮೀಟರು ಉದ್ದದ ಚೂಷಣ ಕೊಳವೆಯೂ ಚೂಷಣ ಕೊಳವೆಯ ಶೋಧಕ ಮತ್ತು ಪಾದಕವಾಟಗಳೂ ನೀರಿನ ಒಳಗಿರಬೇಕು. ಪ್ರಣೋದಕ ಮತ್ತು ನಿರ್ಗಮ ಕೊಳವೆಗಳನ್ನು ಆವರಿಸಿದ ಮುಖ್ಯ ಕೊಳವೆಯಲ್ಲಿ ನೀರುಮೇಲಕ್ಕೆ ಹರಿದು ನಿರ್ಗಮ ಕೊಳವೆಯಲ್ಲಿ ಹೊರಕ್ಕೆ ಬರುತ್ತದೆ. 								(ಎಂ.ಪಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ